Saturday, October 16, 2021
Home > ಅಕ್ರಮ ವಲಸೆ > ಸಾವರ್ಕರ್ ಬದುಕಿನ ಆರಂಭಿಕ ದಿನಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಾಗದ ಕೆಲವು ಅಧ್ಯಾಯಗಳು

ಸಾವರ್ಕರ್ ಬದುಕಿನ ಆರಂಭಿಕ ದಿನಗಳು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಾಗದ ಕೆಲವು ಅಧ್ಯಾಯಗಳು

Translation Credits: Sindhu Nag.

ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟವನ್ನು ಹೊಸದೊಂದು ಆಯಾಮದಿಂದ ನಾವು ಗಮನಿಸಿದ್ದೇ ಆದ್ದಲ್ಲಿ ಅದರ ಇಡೀ ನಿರೂಪಣೆಯೇ  ಬದಲಾಗುತ್ತಾ ಹೋಗುತ್ತದೆ. ಕ್ರಾಂತಿಕಾರಿಗಳನ್ನು ಕೇಂದ್ರವಾಗಿಟ್ಟುಕೊಂಡು ಅವರ ಸಿದ್ಧಾಂತಗಳ ದೃಷ್ಟಿಯಲ್ಲಿ ಇಡಿಯ ಹೋರಾಟವನ್ನು ಗಮನಿಸಿದಾಗ ನಮ್ಮ ಮುಂದೆ ಹೊಸದೊಂದು ಚಿತ್ರಣ ತೆರೆದುಕೊಳ್ಳುತ್ತಾ ಹೋಗುತ್ತದೆ. ಸಹಜವಾಗಿ ನಾಯಕರು, ಹೀರೋಗಳು ಬದಲಾಗುತ್ತಾರೆ. ಯಾರನ್ನು

ಮಂದಗಾಮಿಗಳೆಂದು ಕರೆಯುತ್ತೇವೆಯೋ ಅವರನ್ನು ಯಾವುದೋ ಸಿದ್ಧಾಂತಕ್ಕೆ “ನಿಷ್ಠಾವಂತ”ರೆಂದು ಭಾವಿಸಬೇಕಾಗುತ್ತದೆ. ಹಾಗೆಯೇ ಯಾರನ್ನು ಅಂದು ತೀವ್ರಗಾಮಿಗಳು ಎಂದು ಕರೆದರೋ ಅವರೆಲ್ಲಾ ಅಪ್ಪಟ ರಾಷ್ಟ್ರವಾದಿಗಳಾಗಿ ಕಣ್ಮುಂದೆ ಬರುತ್ತಾರೆ.

ಹೀಗೆ ನೋಡಿದಾಗ, ಇತಿಹಾಸವೂ ಹೊಸ ಛಾಯೆಯನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ಈ ಹೊಸ ಆಯಾಮದ ಸುದೀರ್ಘ ಸಂಘರ್ಷದ ಚಿತ್ರಣದಲ್ಲಿ ಸಾವರ್ಕರ್ ತಮ್ಮನ್ನು ನಟ್ಟ ನಡುವೆ ಕಂಡುಕೊಂಡರು.  1857 ರಿಂದ 1946 ರ ವರೆಗೆ ನಡೆದ ಹೋರಾಟವನ್ನು ಗಣನೆ ತೆಗೆದುಕೊಂಡಾಗ ಈ ವಿಷಯ ಸ್ಪಷ್ಟವಾಗುತ್ತದೆ. ಅದೂ ಅಲ್ಲದೆ ಸಾವರ್ಕರ್, ಬಾಲ ಗಂಗಾಧರ ತಿಲಕ್ ರ ಶಿಷ್ಯರಾಗಿದ್ದರು ಕೂಡ!

ಸಾವರ್ಕರ್ ರವರ ಜನನವಾಗಿದ್ದು, ಚಿತ್ಪಾವನ ಬ್ರಾಹ್ಮಣ ಕುಟುಂಬವೊಂದರಲ್ಲಿ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ, ಭಾಗೂರ್ ಎಂಬ ಪುಟ್ಟದೊಂದು ಹಳ್ಳಿಯಲ್ಲಿ, 1883 ಮೇ 28 ನೇ ತಾರೀಖಿನಂದು. ತಂದೆ ತಾಯಿಯ ಮೂರು ಜನ ಗಂಡು ಮಕ್ಕಳಲ್ಲಿ ಇವರು ಎರಡನೆಯವರು. ಅಣ್ಣ ಗಣೇಶ್ ರಾವ್, ತಮ್ಮ ನಾರಾಯಣ ರಾವ್ ಹಾಗೂ ಅಕ್ಕರೆಯ ಒಬ್ಬಳು ತಂಗಿ ಮೈನಾ, ಇದು ಸಾವರ್ಕರ್ ರವರ ಕುಟುಂಬ.

ಚಿತ್ಪಾವನ ಬ್ರಾಹ್ಮಣರ ಬಗ್ಗೆ, ಬಾಂಬೆಯ ಗವರ್ನರ್ ಆಗಿದ್ದ ಸರ್ ರಿಚರ್ಡ್ ಟೆಂಪಲ್ ಬರೆದ ಕುತೂಹಲಕಾರಿ ಪತ್ರವೊಂದಿದೆ. ಅಂದಿನ ವೈಸರಾಯ್ ಲಾರ್ಡ್ ಲಿಟನ್ ರನ್ನು ಸಂಭೋಧಿಸಿದ್ದ ಆ ಪತ್ರದಲ್ಲಿ, ಟೆಂಪಲ್ ಈ ರೀತಿ ಬರೆಯುತ್ತಾರೆ,

“ನಾವು ಬ್ರಿಟಿಷರು ಭಾರತದ ಆಡಳಿತವನ್ನು ಮೊಘಲರಿಂದ ಹಸ್ತಾಂತರ ಮಾಡಿಕೊಂಡೆವು ಎಂದು ಹಲವರು ಭಾವಿಸುತ್ತಾರೆ, ಆದರೆ ನನಗನಿಸುವ ಪ್ರಕಾರ ನಾವು ಭಾರತವನ್ನು ಮರಾಠರ ಕೈಯಿಂದ ಪಡೆದುಕೊಂಡಿದ್ದೇವೆ. ನಾವೇನೇ ಸವಲತ್ತುಗಳನ್ನು ಕೊಟ್ಟರೂ, ಸರ್ಕಾರಿ ಉದ್ಯೋಗವನ್ನು ಅವರ ಕಾಲ ಬಳಿ ಇಟ್ಟರು, ನಮ್ಮ ಬಗ್ಗೆ ಅವರಿಗಿರುವ ಅಸಮಾಧಾನ, ತಿರಸ್ಕಾರ ಎಂದೂ ಕಡಿಮೆಯಾಗುವುದಿಲ್ಲ. ಅವರೆಲ್ಲಾ ಈ ತೀವ್ರಗಾಮಿ ಗುಂಪುಗಳ ಹಾಗೆ, ನಮ್ಮ ಬಗ್ಗೆ ದ್ವೇಷವನ್ನು ಅವರೆಂದೂ ಬಿಡುವುದಿಲ್ಲ”.

ಟೆಂಪಲ್ ಈ ರೀತಿಯಲ್ಲಿ ಬರೆಯಲು ಬಹು ಮುಖ್ಯವಾದ ಕಾರಣವೊಂದಿದೆ. 1818 ರ ಮೊದಲು ಭಾರತದ ಬಹುತೇಕ ಭಾಗ ಮರಾಠರ ಆಳ್ವಿಕೆಯಲ್ಲಿತ್ತು. ಮರಾಠರ ರಣವಿಕ್ರಮ ಪೇಶ್ವೆಗಳು ಇದೇ ಚಿತ್ಪಾವನ ಬ್ರಾಹ್ಮಣ ವಂಶಸ್ಥರು. ಉಸಿರು ಇರುವವರೆಗೂ ಸ್ವರಾಜ್ಯದ ಕನಸನ್ನು ಬಿಡದಂತಹ ಛಲವಾದಿಗಳು ಅವರು. ಸ್ವಾಭಾವಿಕವಾಗಿ ಈ ವಿಷಯದ ಅರಿವಿದ್ದ ಟೆಂಪಲ್ ನಿಗೆ ಸಾವರ್ಕರ್ ರ ಚಿತ್ಪಾವನ ಬ್ರಾಹ್ಮಣ ಕುಟುಂಬ ಮಗ್ಗುಲ ಮುಳ್ಳಿನಂತೆ ಕಂಡಿದೆ.

ಅವನ ತಳಮಳಕ್ಕೆ ಮತ್ತೊಂದು ಕಾರಣವಿತ್ತು. ಮಹಾರಾಷ್ಟ್ರದಲ್ಲಿ ಜನ್ಮ ತಳೆದ ಮಹಾನ್ ಸಮಾಜ ಸುಧಾರಕರು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ತಂದವರು, ಜ್ಞಾನಿಗಳು, ವಿದ್ವಾಂಸರು ಎಲ್ಲರೂ ಚಿತ್ಪಾವನರೇ! ಗೋಪಾಲ ಕೃಷ್ಣ ಗೋಖಲೆ ಯವರಿಂದ, ಬಾಲ ಗಂಗಾಧರ ತಿಲಕ್ ರವರೆಗೆ, ವಿಷ್ಣು ಶಾಸ್ತ್ರಿ ಚಿಪ್ಲೂಂಕರ್ ರಿಂದ ಗಣೇಶ್ ಅಗರ್ಕರ್ ವರೆಗೆ ಎಲ್ಲರೂ ಅದೇ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು.

ಹೀಗಿದ್ದ ಚಿತ್ಪಾವನ ಬ್ರಾಹ್ಮಣರ ಮಧ್ಯೆ ಸಾವರ್ಕರ್ ಹೊಸದೊಂದು ಹೊಳಹಿನ ಹಾಗೇ ಹುಟ್ಟಿ ಬಂದರು. ಅವರಿಗೆ ಮೊದಲಿನಿಂದಲೂ ಈ ಜಾತಿ ವರ್ಣಗಳ ಬಗ್ಗೆ ಒಲವಿಲ್ಲ. ಜಾತಿ ಎಂಬುದನ್ನೇ ಸಂಪೂರ್ಣವಾಗಿ ತಿರಸ್ಕರಿಸಿದ್ದವರು ಅವರು. ಮೇಲ್ಜಾತಿಯ ಬ್ರಾಹ್ಮಣ ಬಾಲಕನಿಗೆ ಯಾವಾಗಲೂ ಕೆಳ ಜಾತಿಯವರು ಎಂದು ಕರೆಸಿಕೊಳ್ಳುತ್ತಿದ್ದ ಹುಡುಗರ ಜೊತೆ ಆಡಲು, ಕುಣಿಯಲು, ಉಣ್ಣಲು ಇಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ಸಾವರ್ಕರ್ ಒಬ್ಬ ಪುಸ್ತಕ ಪ್ರೇಮಿ, ತನ್ನ ವಯಸ್ಸಿನ ಹಾಗೂ ತಿಳುವಳಿಕೆಯ ಚೌಕಟ್ಟನ್ನು ಮೀರಿ ಪುಸ್ತಕಗಳನ್ನು ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದು ಅವರಿಷ್ಟದ ಕೆಲಸ. ಸಮಯ ಕಳೆಯಲು, ಸ್ನೇಹಿತರೊಂದಿಗೆ ಕೂಡಿ ದಿನ ಪತ್ರಿಕೆಗಳನ್ನೆಲ್ಲಾ  ಓದುವರು. ಅವರೆಲ್ಲರೂ ಕುಳಿತು ಅದರಲ್ಲಿನ ವಿಷಯವನ್ನು ಚರ್ಚಿಸುವರು.. ಇದೇ ಅವರ ದಿನಚರಿಯಾಗಿತ್ತು.

ಸಮಾಜದಲ್ಲಿ ಒಂದಾಗಿ, ಎಲ್ಲರೊಳಗೆ ತಾನೂ ಒಬ್ಬ ಎಂಬ ಭಾವನೆ, ಸಾವರ್ಕರರಿಗೆ ಬಾಲ್ಯದಲ್ಲಿಯೇ ಇದ್ದ ಸದ್ಗುಣ. ಸ್ಪರ್ಧಾತ್ಮಕ ಮನೋಭಾವಕ್ಕಿಂತ ಅವರಲ್ಲಿ ಇದ್ದದ್ದು ಎಲ್ಲರೊಂದಿಗೆ ಬೆರೆತು ಬಾಳುವ ಗುಣ. ಓದಿನ ಅಪಾರ ಆಸಕ್ತಿ, ಸ್ವಾಭಾವಿಕವಾಗಿ ಅವರೊಳಗೆ ಕವಿಯೊಬ್ಬನನ್ನು ಹುಟ್ಟುಹಾಕಿತ್ತು. ಕೇವಲ ಆರು ವರ್ಷದ ಸಣ್ಣ ಪ್ರಾಯದಲ್ಲಿ ಹೆತ್ತಮ್ಮನನ್ನು ಕಾಲರಾ ಬಲಿ ಪಡೆಯುತ್ತದೆ. ಹಠಾತ್ತಾಗಿ ನಾಲ್ಕು ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಅವರ ತಂದೆ ದಾಮೋದರ್ ಪಂತರ ಹೆಗಲೇರುತ್ತದೆ.

ಇದೇ ಹೊತ್ತಲ್ಲಿ, ಪ್ಲೇಗ್ ಎಂಬ ಮಹಾಮಾರಿ, ಮಹಾರಾಷ್ಟ್ರದಲ್ಲಿ ತನ್ನ ರುದ್ರ ನರ್ತನಕ್ಕೆ ಅಸಂಖ್ಯಾತ ಜನರನ್ನು ಬಲಿ ಪಡೆಯುತ್ತಾ, ಅದೆಷ್ಟೋ ಕುಟುಂಬಗಳನ್ನು ನುಚ್ಚು ನೂರು ಮಾಡುತ್ತದೆ. ಬ್ರಿಟಿಷರಿಗೆ ಅದನ್ನು ಹೇಗಾದರೂ ನಿಗ್ರಹಿಸಿ ಬೇಕು ಎಂಬ ಆಶಯವೇನೋ ಇತ್ತು, ಆದರೆ ಅದಕ್ಕಾಗಿ ಅವರು ತೆಗೆದುಕೊಂಡ ಕ್ರಮಗಳು ಮಾತ್ರ, ಆತಂಕಕಾರಿ, ದಮನಕಾರಿ. ಪ್ಲೇಗ್ ಸೊಂಕಿತರನ್ನು ಹುಡುಕುವ ನೆಪದಲ್ಲಿ ಮನೆ ಮನೆಗೆ ನುಗ್ಗಿ, ಬೇಕಾಬಿಟ್ಟಿ ಜನರನ್ನು ಪರೀಕ್ಷೆಗೆ ಒಳಪಡಿಸುವರು, ಹೆಂಗಸರ ಜೊತೆ ಅನುಚಿತವಾಗಿ ವರ್ತಿಸುವರು, ದೇವರ ಕೋಣೆಗೆ ಬೂಟು ಕಾಲಿನಲ್ಲಿ ನುಗ್ಗಿ ಮನೆಯನ್ನಿಡಿ ಧ್ವಂಸ ಮಾಡುವರು.  ಸೊಂಕೀತರನ್ನು ಊರಿನ ಹೊರಗೆ ಯಾರನ್ನು ಭೇಟಿಯಾಗದಂತೆ ನಿರ್ಬಂಧಿಸಿ ಕ್ಯಾಂಪ್ ಗಳಲ್ಲಿ ಇಡುವರು. ಇಂತಹ ಕ್ರೂರ ವರ್ತನೆ ಜನರ ಮನಸ್ಸಲ್ಲಿ ಎಂತಹ ಹೆದರಿಕೆ ಹುಟ್ಟುಹಾಕಿತ್ತು ಎಂದರೆ, ಮನೆಯಲ್ಲಿ ಎಲ್ಲಾದರೂ ಇಲಿ ಸತ್ತು ಬಿದ್ದಿದ್ದು ಕಂಡರೆ, ವಿಷಯ ಹೊರಗೆಲ್ಲೂ ಗೊತ್ತಾಗದ ರೀತಿ ಗೌಪ್ಯವಾಗಿ ಇಡುತ್ತಿದ್ದರು.  ಮನೆಯಲ್ಲಿ ಸಾವೋ ನೋವೋ ಸಂಭವಿಸಿದಾಗ ಮಾತ್ರ ಊರಿನ ಜನಕ್ಕೆ ಪ್ಲೇಗ್ ಸೋಂಕು ತಗುಲಿದ ವಿಷಯ ತಿಳಿಯುತ್ತಿತ್ತು.

ಪ್ಲೇಗ್ ನಿಗ್ರಹಿಸಲೆಂದು ಮಹಾರಾಷ್ಟ್ರಕ್ಕೆ ಬಂದಿದ್ದ, ವಾಲ್ಟರ್ ರಾಂಡ್ ಮತ್ತು ಲೆಫ್ಟಿನೆಂಟ್ ಚಾರ್ಲ್ಸ್ ಆಯೇರ್ಸ್ಟ್ ನ ದಬ್ಬಾಳಿಕೆ ಮತ್ತು ವರ್ತನೆ ಅದೆಷ್ಟು ಅಸಹ್ಯವಾಗಿತ್ತು ಎಂದರೆ, ಪುಣೆಯ ಮೂವರು ಸಹೋದರರು ಅವರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಮಯ ನೋಡುತ್ತಿದ್ದರು.  ದಾಮೋದರ ಹರಿ ಚಾಪೇಕರ್, ಕೃಷ್ಣ ಹರಿ ಚಾಪೇಕರ್, ಮತ್ತು ಅವರ ತಮ್ಮ ವಾಸುದೇವ ಹರಿ ಚಾಪೇಕರ್ – ಚಾಪೇಕರ್ ಸಹೋದರರು ಎಂದೇ ಪ್ರಸಿದ್ಧರಾದವರು – ಈ ಮೂವರು ಕೈಗೆ ಪಿಸ್ತೂಲು ತೆಗೆದುಕೊಳ್ಳಲು ನಿರ್ಧರಿಸಿ ಆ ಇಬ್ಬರು ದುಷ್ಟರನ್ನು ಸಂಹರಿಸಿಯೇ ಬಿಟ್ಟರು.

ಈ ಘಟನೆ ಬಾಂಬೆ ಸುತ್ತಮುತ್ತ ಬಹು ಚರ್ಚೆಗೆ ಕಾರಣವಾಯಿತು. ಚಾಪೇಕರ್  ಸಹೋದರರ ಈ ನಿರ್ಧಾರ ಒಂದು ರೀತಿಯಲ್ಲಿ ಇಡೀ ಚಿತ್ಪಾವನ ಸಮುದಾಯವನ್ನೇ ಅಲ್ಲಾಡಿಸಿ ಬಿಟ್ಟಿತು. ಒಂದು ಕಡೆ, ತಮ್ಮವರನ್ನು ಕೊಂದರು ಎನ್ನುವ ಕಾರಣಕ್ಕೆ ಬ್ರಿಟಿಷರು ಚಾಪೇಕರ್ ಸಹೋದರರನ್ನು, ಹಾಗೂ ಚಿತ್ಪಾವನರನ್ನು ಮತ್ತಷ್ಟು ದ್ವೇಷಿಸಲು ಪ್ರಾರಂಭಿಸಿದರು. ಇತ್ತ ಚಿತ್ಪಾವನರಲ್ಲಿ ಹಾಗೂ ಇತರರಲ್ಲಿ, ದ್ವಂದ್ವವೊಂದು ತಲೆ ಎತ್ತಿತು. ಒಂದು ಕಡೆ ಬ್ರಿಟಿಷ್ ಅಧಿಕಾರಿಗಳ ಹತ್ಯೆ ಸರಿ ಎಂಬ ಅಭಿಪ್ರಾಯ ಎದ್ದರೆ, ಕೇಸರಿ ಯೂ ಸೇರಿ ಹಲವಾರು ಮರಾಠಿ ದಿನಪತ್ರಿಕೆಗಳು ಈ ಕೃತ್ಯವನ್ನು ಮೂರ್ಖತನವೆಂದು ಬಿಂಬಿಸಿದವು!

ಆದರೆ 14 ವರ್ಷ ವಯಸ್ಸಿನ ಬಾಲಕ ಸಾವರ್ಕರ್ ರನ್ನು, ಚಾಪೇಕರ್ ಸಹೋದರರ ಸಾಹಸಗಾಥೆ ಆಳವಾಗಿ ತಟ್ಟಿತ್ತು. ನೇಣುಗಂಬಕ್ಕೆ ಏರುವಾಗಲೂ ಅವರ ಮುಖದಲ್ಲಿ ನಗುವಿತ್ತಂತೆ, ಬಾಯಲ್ಲಿ ಭಗವದ್ಗೀತೆ ಹೇಳಿಕೊಂಡೇ ನೇಣಿಗೇರಿದರಂತೆ ಎಂಬ ಮಾತುಗಳು 14 ವರ್ಷ ಪ್ರಾಯದ ಆ ಬಾಲಕನನ್ನು ಹೇಗೆ ಪ್ರಭಾವಿತಗೊಳಿಸಿದ್ದವು ಎಂದರೆ, ತನ್ನ ಮನೆ ದೇವರಾದ ಅಷ್ಟ ಭುಜ ಭವಾನಿಯ ಎದುರು ನಿಂತು, ತನ್ನ ಮಾತೃ ಭಾಷೆ ಮರಾಠಿಯಲ್ಲಿ ಶಪಥಗೈಯುತ್ತಾನೆ.

“ನಾನು ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವೆ, ಕೊನೆಯ ವೈರಿಯ ಉಸಿರು ನಿಲ್ಲಿಸುವ ವರೆಗೂ ಹೋರಾಡುವೆ!”

ಅಂದು ಸಾವರ್ಕರ್ ಪ್ರತಿಜ್ಞೆ ಮಾಡಿದ ಆ ದೇವಿಯ ಮೂರ್ತಿಯನ್ನು ಈಗಲೂ ಖಂಡೋಬಾ ದೇವಸ್ಥಾನದಲ್ಲಿ ಕಾಣಬಹುದು. 14 ವರ್ಷದ ಬಾಲಕ ಅದೇನೋ ಯೋಚನೆಯಲ್ಲಿ, ಅದೇನೋ ಬಿಸಿ ರಕ್ತದ ಉತ್ಸಾಹದಲ್ಲಿ, ಬಾಲಿಶ ಎನಿಸುವ ನಿರ್ಧಾರ ತೆಗೆದುಕೊಂಡ ಎಂದು ಭಾವಿಸಿಕೊಂಡವರೇ ಎಲ್ಲಾ!

ಆದರೆ ಅವರಿಗೆ ತಾನೇ ಎಲ್ಲಿ ಗೊತ್ತಿತ್ತು, ಆ ಬಿಸಿ ರಕ್ತದ ಪ್ರತಿಜ್ಞೆಯ ಪರಿಣಾಮ ಇಡೀ ಕುಟುಂಬವೇ ಬರುವ ದಿನಗಳಲ್ಲಿ ಅನುಭವಿಸಲಿದೆಯೆಂದು!


Leave a Reply

Sarayu trust is now on Telegram.
#SangamTalks Updates, Videos and more.

Powered by
%d bloggers like this: