ಸ್ಮರಣೆ (ಸ್ಮೃತಿ) ಎನ್ನುವುದು ಇಂದು ಬಹು ಮುಖ್ಯವಾದ ವಿಷಯವಾಗಿರುವುದೇಕೆ? ಸಮಾಜದಲ್ಲಿ ಮಹತ್ವವಾದ ಬದಲಾವಣೆ ಸಂಭವಿಸಿ, ಘಟನಾವಳಿಗಳ ಹರಿವು ಒಡೆದಾಗ, ಸ್ಮರಣೆ ಎನ್ನುವುದು ಅಧ್ಯಯನದ ವಿಷಯವಾಗುತ್ತದೆ. ಉದಾಹರಣೆಗೆ ಅಮೇರಿಕಾದ 9/11 ಘಟನೆಯು ಸಮಾಜವನ್ನು ಛಿದ್ರಗೊಳಿಸಿತು, ಆದ್ದರಿಂದ ಹಠಾತ್ತಾಗಿ ನಮ್ಮೆಲ್ಲರ ಗಮನ ಸ್ಮರಣೆಯ ಕಡೆಗೆ ಹರಿಯುತ್ತದೆ. ಹಾಗಾಗಿ ನಾವು ಯಾರು, ನಾವೇಕೆ ಹೀಗೆ ಎಂಬುದನ್ನು ತಿಳಿಯುವ ಪ್ರಾಮುಖ್ಯತೆ ಬರುವುದು ಸಮಾಜದಲ್ಲಿರುವ ಬಿರುಕಿನಿಂದ. ಈ ಕ್ಷಣಕ್ಕೆ ಸಮಾಜದಲ್ಲಿ ಬಿರುಕಾಗಿದೆ ಹಾಗೂ ಮತ್ತಷ್ಟು ಬಿರುಕಾಗುತ್ತಲಿದೆ ಎಂದು ನಾನು ನಂಬುತ್ತೇನೆ. ಏಕೆ? ಸ್ಪಷ್ಟವಾಗಿ ತಿಳಿಯುವುದಕ್ಕಾಗಿ ನಾವು ನಮ್ಮ ಸ್ಮರಣಾಶಕ್ತಿಯ ಮೊರೆ ಹೋಗಬೇಕಿದೆ. ಬಹುತೇಕ ದೇಶಗಳನ್ನು ಅಧ್ಯಯನ ಮಾಡಿದರೆ ತಿಳಿಯುವ ವಿಚಾರ ಆ ದೇಶಗಳಲ್ಲಿರುವ ಸಾಮೂಹಿಕ ಸ್ಮರಣೆ. ಜರ್ಮನಿಯಲ್ಲಿ ಬಹು ಪ್ರಬಲವಾದ ಸಾಮೂಹಿಕ ಸ್ಮರಣೆಯುಂಟು. ಉದಾಹರಣೆಗಳಲ್ಲಿ ಮಾತ್ರ ನಾನು ವಿವರಿಸಬಲ್ಲೆ.
ಒಮ್ಮೆ ನಾನು ಜರ್ಮನಿಯಲ್ಲಿ ವರ್ಕ್-ಷಾಪ್ (ಕಾರ್ಯಾಗಾರ) ನಡೆಸುತ್ತಿದ್ದೆ. ಅದು ಮನೋವಿಜ್ಞಾ ನಕ್ಕೆ ಸಂಬಂಧಿಸಿದ್ದ ವರ್ಕ್-ಷಾಪ್ ಆಗಿತ್ತು. ಪ್ರೇಕ್ಷಕರಲ್ಲಿ ಒಬ್ಬ ಜರ್ಮನ್ನಿನ ಹುಡುಗಿಯಿದ್ದಳು. ಆಕೆಗೆ ನಾನು ಚಟುವಟಿಕೆಯೊಂದನ್ನು ನೀಡಿದ್ದೆ ಮತ್ತು ಆಕೆ ಮೌನದಿಂದಿರುವುದನ್ನು ಗಮನಿಸಿದೆ. ಆಕೆ ಸುಮ್ಮನೆ ಕುಳಿತಿದ್ದಳು. ನಾನು ಹಾಗೂ ನನ್ನ ಜರ್ಮನ್ ಸಹೋದ್ಯೋಗಿ ಆಕೆಯ ಬಳಿ ಹೋಗಿ, “ನಿನಗೆ ಈ ಚಟುವಟಿಕೆಯು ಕಷ್ಟವಾಗುತ್ತಿರಬಹುದು, ನಾನು ದೂರದ ದೇಶದಿಂದ ಬಂದಿರುವವನು, ನಿಮ್ಮ ಸಂಸ್ಕೃತಿಯ ಬಗ್ಗೆ ಅಷ್ಟೊಂದು ತಿಳಿದಿಲ್ಲ. ಹಾಗಾಗಿ ನಾನು ಹೇಳುತ್ತಿರುವುದು ಅರ್ಥವಾಗದಿದ್ದರೆ ನಾವು ವಿವರವಾಗಿ ಮಾತನಾಡಬಹುದೇ?” ಎಂದು ಕೇಳಿದೆ. ಆಗ ಆಕೆ ಇನ್ನಷ್ಟು ಹಿಂಜರಿದಳು. “ನಾನೇನಾದರೂ ತಪ್ಪು ಮಾತನಾಡಿದೆನೆ?” ಎಂದು ಕೇಳಿದೆ. ಆಗ ನನ್ನ ಜರ್ಮನ್ ಸಹೋದ್ಯೋಗಿ ಡಾ.ಪೆಟ್ರಿ ನನ್ನನ್ನು ತಡೆದರು. ಅವರು ಆ ಹುಡುಗಿಗೆ ಜರ್ಮನ್ನಿನ್ನಲ್ಲಿ ಏನನ್ನೋ ಹೇಳಿ ನನ್ನನ್ನು ಆಚೆಗೆ ಕರೆದೊಯ್ದರು. ಅವರು ಆಗ ಹೇಳಿದ ಪ್ರತಿಯೊಂದು ಮಾತು ನನಗೆ ನೆನಪಿದೆ. ಅವರು ಹೇಳಿದ್ದು, “ರಜತ್, ನಿಮ್ಮ ಮಾತು ಆಕೆಗೆ ಸಮ್ಮೋಹನಗೊಳಿಸುವಂತೆ ಕೇಳಿಸಿದೆ. ನಿಮ್ಮ ಭಾಷೆ ಮೈಮರೆಸುವಂತಿದೆ. ನಿಮ್ಮ ಭಾರತೀಯ ಭಾಷೆಗಳು ಆರೋಹಣ-ಅವರೋಹಣಗಳಿಂದ ಕೂಡಿದೆ ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ಮಾತುಗಳಲ್ಲಿ ಏರಿಳಿತಗಳಿವೆ.” ನಾನು ಆಗ “ಹೌದು, ಅದನ್ನು ನಾನು ಒಪ್ಪುತ್ತೇನೆ” ಎಂದೆ. ಅವರು ಮತ್ತೆ “ಜರ್ಮನ್ನರು ಹೇಗೆ ಮಾತನಾಡುತ್ತಾರೆ ಎಂದು ನೀವು ಗಮನಿಸಿದ್ದೀರಾ?” ಎಂದು ಕೇಳಿದರು. “ಈಗ ನೀವು ಹೇಳಿದಮೇಲೆ ನನ್ನ ಗಮನಕ್ಕೆ ಬರುತ್ತಿದೆ, ನೀವು ಜರ್ಮನ್ನರು ನೇರವಾಗಿ ಮಾತನಾಡುವವರು. ಒಂದೇ ಸ್ವರ, ಒಂದೇ ಮಟ್ಟ, ನಿಮ್ಮ ಹೆದ್ದಾರಿಯಲ್ಲಿ ಮರ್ಸಿಡಿಸ್ ನಲ್ಲಿ ೨೦೦ಕಿ.ಮೀ. ಪ್ರತಿ ಘಂಟೆ ವೇಗದಲ್ಲಿ ಹೋದಂತೆ. ಯಾವ ಏರಿಳಿತಗಳೂ ಇರುವುದಿಲ್ಲ.” ಎಂದು ಹೇಳಿದೆ. “ಹೌದು, ಜರ್ಮನಿಯಲ್ಲಿ ಸಮ್ಮೋಹಕ ಭಾಷೆಯಲ್ಲಿ ಅಥವಾ ನೀವು ಏರಿಳಿತಗಳಿಂದ ಮಾತನಾಡಿದಾಗ ನಮ್ಮವರು ಹಂಜರಿಯುತ್ತಾರೆ. ಅಂಥ ವ್ಯಕ್ತಿಗಳನ್ನು ನಾವೆಂದೂ ನಂಬುವುದಿಲ್ಲ” ಎಂದು ಉತ್ತರಿಸಿದರು. ಆಗ ನಾನು “ಇದು ನನಗೆ ಹೊಸದಾಗಿ ತಿಳಿಯುತ್ತಿರುವ ಸಂಗತಿ, ಆದರೆ ಏಕೆ ಹೀಗೆ?” ಎಂದು ಕೇಳಿದೆ. ಆಗ ಅವರು ಹೇಳಿದ್ದು “ಹಿಟ್ಲರ್ ನಮಗೆ ಏನೇನೆಲ್ಲ ಮಾಡಿದನೆಂದು ನಿಮಗೆ ತಿಳಿದಿದೆ. ಹಿಟ್ಲರ್ ನ ಧ್ವನಿ ತೀವ್ರ ಸಮ್ಮೋಹಿತಗೊಳಿಸುವಂತಾಗಿದ್ದು, ಬಹಳ ಏರಿಳಿತಗಳಿಂದ ಕೂಡಿತ್ತು. ಅಂದಿನಿಂದ ಯಾರಾದರೂ ಏರಿಳಿತಗಳಿಂದ, ಮೈಮರೆಸುವಂತೆ ಮಾತನಾಡಿದರೆ ಅಂಥವರಲ್ಲಿ ನಾವು ವಿಶ್ವಾಸ ತೋರುವುದಿಲ್ಲ. ಹಾಗಾಗಿ ಮುಂದೆ ಹೀಗೆ ಮಾತನಾಡಬೇಡಿ.”
ಅದಾದ ನಂತರ ನಾನು ಜರ್ಮನಿಯಲ್ಲಿ ಬಹಳಷ್ಟು ವರ್ಕ್-ಷಾಪ್ ಗಳನ್ನು ನಡೆಸಿದ್ದೇನೆ. ಪ್ರತಿ ಬಾರಿಯೂ ಒಂದೇ ಸ್ವರ, ಒಂದೇ ಮಟ್ಟದಲ್ಲಿ, ಯಾವ ಏರಿಳಿತಗಳೂ ಇಲ್ಲದೆ ಮಾತನಾಡುತ್ತೇನೆ, ಹಾಗೂ ಅದರಲ್ಲಿ ಯಶಸ್ವಿಯಾಗಿದ್ದೇನೆ ಕೂಡ. “ಬಹಳ ಅದ್ಭುತವಾದ ವರ್ಕ್ ಷಾಪ್! ನಾವು ತುಂಬಾ ಸಂತೋಷಪಟ್ಟೆವು, ಧನ್ಯವಾದಗಳು” ಎಂದು ಜರ್ಮನ್ನರು ಹೇಳಿದ್ದಾರೆ ಎಂದರೆ ನೀವು ನಂಬಬೇಕು. ನಾನು ಆಗೆಲ್ಲಾ “ಹೌದು, ಅದು ನಿಜʼ ಎಂದು ಸಮ್ಮತಿಸುವೆ. ಹೀಗೆ ಒಬ್ಬ ವ್ಯಕ್ತಿ, ಸುಮಾರು ೭೦ ವರ್ಷಗಳೇ ಕಳೆದರೂ, ʼನಮ್ಮ ಸಂಸ್ಕೃತಿಯಲ್ಲಿ ಯಾರೂ ನಮ್ಮನ್ನು ಲಘುವಾಗಿ ನೋಡದೆ, ನಮ್ಮನ್ನು ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದು ನಿರ್ಧರಿಸಲಾಗಿದೆ ಹಾಗೂ ಇದು ಹೀಗೆ ಮುಂದುವರೆಯಬೇಕು ಎಂಬುದು ನಮ್ಮ ಆದ್ಯತೆʼ ಎಂಬ ಮನಃಸ್ಥಿತಿ ಹೊಂದಿರುತ್ತಾರೆ ಎನ್ನುವುದು ಗಮನಾರ್ಹ.