ಸರ್ಕಾರದ ಹಿಡಿತದಲ್ಲಿರುವ ಹಿಂದೂ ಮಂದಿರಗಳ ವ್ಯವಹಾರಗಳನ್ನು ನೋಡೋಣ. ಇದರ ಉದಾಹರಣೆಗಳು ಬಹಳಷ್ಟಿವೆ. ವಾರದಿಂದ ವಾರಕ್ಕೆ ನಾವು ತಿರುಪತಿ ತಿರುಮಲ ದೇವಾಲಯದ ಅರ್ಚಕರ ವಿವಾದ ಕೇಳುತ್ತೇವೆ. ಅದರಲ್ಲಿ ಹಲವಾರು ದೃಷ್ಟಿಕೋನಗಳಿವೆ, ಉದಾಹರಣೆಗೆ ಮಂತ್ರ ಉಚ್ಛಾರಣೆಗೆ ತಡೆ, ಇತ್ಯಾದಿ. ಮಂದಿರಗಳ ವಾಣಿಜ್ಯೀಕರಣ, ಹಣದ ನೆರವಿನಿಂದ ವಿಭಿನ್ನ ರೀತಿಯ ಉಪಚಾರ ಒದಗಿಸುವ ಹಲವಾರು ಸೇವೆಗಳಿದ್ದು, ಕೇವಲ ಈ ಪೂಜೆಗಳಿಗೆ ಮಾತ್ರ ಜನರು ಪಾಲ್ಗೊಳ್ಳುವುದು, ಹೀಗೆ ಬಹಳಷ್ಟು ದುರುಪಯೋಗ ಹಾಗೂ ದುರ್ಬಳಕೆಗಳಾಗುತ್ತಿವೆ. ಇವೆಲ್ಲಾ ಇದರ ಪರಿಣಾಮಗಳು. ವಿಶೇಷವಾಗಿ ದಕ್ಷಿಣ ಭಾರತದಲ್ಲಿರುವ ಬಹುತೇಕ ಎಲ್ಲಾ ಮಂದಿರಗಳ ನಿಯಂತ್ರಣ ಕಳೆದುಹೋಗಿದೆ. ಇದು ಈ ನಿಯಮದ ಬಹು ದೊಡ್ಡಅಡ್ಡಪರಿಣಾಮ ಅಥವಾ ಬಹು ಮುಖ್ಯ ಪರಿಣಾಮಗಳಲ್ಲೊಂದಾಗಿದೆ. ಸರಳವಾಗಿ ಹೇಳುವುದಾದರೆ, ಎಷ್ಟು ಪ್ರಮಾಣದ ಭೂಮಿ ಮಂದಿರಕ್ಕೆ ಸೇರುತ್ತದೆ ಹಾಗೂ ಎಷ್ಟು ಕಳೆದುಹೋಗಿದೆ ಎನ್ನುವುದರ ಅರಿವೇ ಇಲ್ಲದಾಗಿದೆ. ಆಶ್ಚರ್ಯದ ವಿಷಯವೆಂದರೆ ಸಾವಿರಾರು ವರ್ಷಗಳ ಹಿಂದಿನ ಪರಂಪರೆಗೂ ಈಗಿರುವ ಪರಿಸ್ಥಿತಿಗೂ ಬಹಳ ವ್ಯತ್ಯಾಸವಿದೆ. ನೀವು ಭಾರತದ ಯಾವುದೇ ಇತಿಹಾಸದ ದಾಖಲೆಯನ್ನು ಗಮನಿಸಿದರೆ, ರಾಜರುಗಳು ಮಂದಿರಗಳಿಗಾಗಿ ಭೂಮಿಯನ್ನು ಮಂಜೂರು ಮಾಡುವುದು, ದಾನ ನೀಡುವುದನ್ನು ಕಾಣಬಹುದು. ಆದರೆ ಈಗ ಸುಮಾರು ಎಪ್ಪತ್ತು ವರ್ಷಗಳಿಂದ ಅದಕ್ಕೆ ವಿರುದ್ಧವಾಗಿ ಭೂಮಿಯನ್ನು ಹಿಂಪಡೆದುದಲ್ಲದೆ ಅದು ಎಲ್ಲಿ ಹೋಯಿತೆಂದು ತಿಳಿಯದಾಗಿದೆ.
ಹೀಗೆ ಹತ್ತು ಹಲವಾರು ವಿವಿಧ ಸಮಸ್ಯೆಗಳಿವೆ. ವಾಸ್ತವವಾಗಿ ಸರಿಯಾದ ನಿರ್ವಹಣೆ ನಡೆಯದಿರುವುದೇ ಇದರ ಸಾರಾಂಶ. ಸರ್ಕಾರ ಮಂದಿರಗಳನ್ನು ವಶಪಡಿಸಿಕೊಂಡಿರುವ ಉದ್ದೇಶವೇ ಆಡಳಿತ ವ್ಯವಸ್ಥೆಯಲ್ಲಿರುವ ತೊಂದರೆಗಳನ್ನು ನಿರ್ಮೂಲನೆ ಮಾಡುವುದು. ಆದರೆ ಈಗ ತೊಂದರೆಗಳು ಉಲ್ಬಣಗೊಂಡಿವೆ. ಕೊನೆಯದಾಗಿ ಗಂಭೀರವಾದ ವಿಷಯವೆಂದರೆ ಹಿಂದೂಗಳಲ್ಲದವರನ್ನು ಮಂದಿರದ ಮಂಡಳಿ ಹಾಗೂ ಸಿಬ್ಬಂದಿಗಳಾಗಿ ನೇಮಕ ಮಾಡುವುದು ದೊಡ್ಡದಾದ, ಪವಿತ್ರವಾದ ಮಂದಿರಗಳಲ್ಲಿ ನಡೆಯುತ್ತಿದೆ. ಉದಾಹರಣೆಗೆ ತಿರುಪತಿ ದೇವಸ್ಥಾನದ ವಿವಾದ.